Thursday, 1 October 2020

 ಶ್ರೀ ಗೋಪಾಲಕೃಷ್ಣ ಅಡಿಗರ " ಅಳುವ ಕಡಲಲಿ ತೇಲಿ ಬರುತಲಿದೆ ನಗೆಯ ಹಾಯಿ ದೋಣಿ ".. ಹಾಡು ಕೇಳುತ್ತಲೇ ಇದ್ದೇನೆ ..on   repeat mode..ಅಡಿಗರ ಪದ್ಯಗಳೇ  ಹೀಗೆ .. ಸೀದಾ ಹೃದಯಕ್ಕೆ ಲಗ್ಗೆ ಇಡುವಂಥದ್ದು , ಕಾಡುವಂಥದ್ದು ..ಕೊನೆಗೆ ನಮ್ಮಲ್ಲೇ  ಒಂದು ಹಾಡಾಗಿ ಉಳಿಯುವಂಥದ್ದು . ಅಡಿಗರೇ ನಿಮಗೊಂದು ನಮನ.. ಅಡಿಗರ ಈ ಹಾಡು ನನ್ನನ್ನು ಚಿಂತನೆಗೆ ಹಚ್ಚಿಸಿದೆ ..ಒಂದು ತಿಂಗಳು ಬಿಡದೆ ಕಾಡಿದೆ. 
ಕೆಲವೊಂದು ಘಟನೆಗಳು ಕೇವಲ ಘಟನೆಗಳಾಗಿ ಉಳಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?ಹೋಗಲಿ ಆಗಾಗ ಬಂದು ಕಾಡಿದರೂ ,ಕಹಿ ನೆನಪಾಗಿ ಬಂದು ಅಳಿಸಿದರೂ ಪರವಾಗಿರ್ತ ಇರ್ಲಿಲ್ಲ ,ಆದರೆ ಒಮ್ಮೊಮ್ಮೆ ನಮ್ಮ  ಬದುಕಿನ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ  .ನಮ್ಮನ್ನು ರೂಪಿಸುತ್ತಾ,ಕುರೂಪಿಸುತ್ತಾ ಹೋಗುತ್ತದೆ.ಎಲ್ಲಾ ಮುಗೀತು ಅಂದುಕೊಳ್ಳುತ್ತಿರುವಾಗಲೇ ,ಧುತ್ತ್ ಎಂದು ಕಣ್ಣ ಮುಂದೆ ಬಂದು ನಿಂತುಕೊಳ್ಳುತ್ತದೆ ,ಬೇರೆ ಇನ್ನ್ಯಾವುದೋ ರೂಪದಲ್ಲಿ !  ಹೃದಯಕ್ಕೆ ಹತ್ತಿರವಾದವರು ಅಥವಾ  ಹೃದಯಕ್ಕೆ ಹತ್ತಿರವಾದ ಸಂಬಂಧವೊಂದು ಸತ್ತಾಗ ನಾವೇಕೆ ಅಳುತ್ತೇವೆ ?ಕೊರಗುತ್ತೇವೆ?ಸೊರಗುತ್ತೇವೆ?ಜೀವನ ಏಕೆ ಶೂನ್ಯವೆನಿಸ ತೊಡಗುತ್ತೆ ?ನಮ್ಮನ್ನು ಯಾವುದು ಅತಿಯಾಗಿ ಕಾಡುತ್ತೆ ? ನೆನಪುಗಳು ಅಲ್ವಾ ?ಈ "ನೆನಪುಗಳು ".ಅದೆಂಥಾ ಶಕ್ತಿ ಈ ನೆನಪುಗಳಿಗೆ .. ನಾವು ಅಳುವುದು ,ಕ್ಷಣ ಕ್ಷಣವೂ ಒದ್ದಾಡುವುದು ಇದೆ ನೆನಪುಗಳಿಗಾಗಿ ,ಇದೇ ನೆನಪುಗಳಿಂದಾಗಿ .ಇನ್ನು ಹೊಸ ನೆನಪುಗಳಿಗೆ ಆಸ್ಪದವಿಲ್ಲ ಎನ್ನುವ ಕಟು ಸತ್ಯದ ಅರಿವಾಗಿ . ಕೆಲವು ಸಾವಿನ ಸೂತಕ ನಿರಂತರ ,ನಂಬಿಕೆಯ ಕೊಲೆಯಾದಾಗ ಕೈಗೆ ರಕ್ತ  ಮೆತ್ತುವುದಿಲ್ಲ. ಹೃದಯದ ಸ್ಪೋಟಕ್ಕೆ ಸದ್ದಿಲ್ಲ. ಇಂತಹ ಘಟನೆಗಳು ಎಂಥಹ ದೃಢ ಮನಸ್ಥಿತಿಯವನನ್ನೂ ದೀನರನ್ನಾಗಿ ಮಾಡಿಬಿಡುತ್ತದೆ.ಆ ಸಂಬಂಧವನ್ನು ಹಿಡಿಟ್ಟುಕೊಂಡಿದ್ದ ನಮ್ಮ ಹೃದಯದ ಒಂದು ಭಾಗ ಆ ವ್ಯಕ್ತಿಯೊಡನೆಯೇ  ಸತ್ತು ಹೋಗುತ್ತದೆ .  ಅದೊಂದು ಶೋಚನೀಯ ಸ್ಥಿತಿ ,ಅತ್ಯಂತ ಕ್ರೂರವಾದ ಸ್ಥಿತಿ . ನಮ್ಮನ್ನು ನುಂಗುವ ಖಾಲಿತನ . ಮನಸ್ಸು ದೇಹ ಎರಡೂ ದುರ್ಬಲವಾಗುತ್ತ ಹೋಗುತ್ತದೆ .,ತಾತ್ಕಾಲಿಕ ನೆಮ್ಮದಿಯನ್ನು ಅರಸುತ್ತಾ ಹೋಗುತ್ತದೆ .. ಆ ಶೂನ್ಯವನ್ನು ತುಂಬುವ ಪ್ರಯತ್ನದಲ್ಲಿ ತುಂಬಾ ಜನ ಇಲ್ಲೇ ಅಲ್ವಾ ಹೆಜ್ಜೆ ತಪ್ಪೋದು ?ಆತ್ಮಹತ್ಯೆಯ ಬಗ್ಗೆ ಯೋಚಿಸೋದು? ದುಶ್ಚಟಗಳಿಗೆ ಬೀಳೋದು ?
ಆದರೆ ಘಟನೆಯ ತೀವ್ರತೆ ಎಷ್ಟೇ ಇರಲಿ,ಹೃದಯವನ್ನು ಎಷ್ಟೇ ಹಿಂಡಿರಲಿ , ಆತ್ಮಗೌರವವನ್ನು ಎಷ್ಟೇ ಘಾಸಿಗೊಳಿಸಿರಲಿ ,ಈ ಸ್ಥಿತಿಯಿಂದ ನಮ್ಮನ್ನು ನಾವು ಹೊರತರಲು ಪ್ರಯತಿಸಲೇ ಬೇಕು . ಈ ಹಂತವನ್ನು ದಾಟಲೇ ಬೇಕು ಹಾಗು ಈ ನೋವನ್ನು ಸಂಪೂರ್ಣವಾಗಿ ಅನುಭವಿಸಲೇ ಬೇಕು .ಇದರಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಹುಡುಕಿದೇವೋ ,ಮುಗಿಯಿತು ..ಅಲ್ಲೇ ಅದೇ ಸ್ಥಿತಿಯಲ್ಲೇ  ಒದ್ದಾಡುತ್ತಲೇ ಇರುತ್ತೇವೆ .ನಮ್ಮನ್ನು ನಾವೇ "victim "mode ಗೆ ತಳ್ಳಿಕೊಂಡು ಬಿಡುತ್ತೇವೆ .ಕೊರಗೋದ್ರಲ್ಲಿ ಸುಖ ಕಾಣುತ್ತೇವೆ. ಹೌದು ಕೆಲವೊಂದು ಘಟನೆಗಳ ತೀವ್ರತೆ ಪದಗಳಿಗೆ ಮೀರಿದ್ದು , ಅನುಭವಿಸಿದವರಿಗೆ ಮಾತ್ರ ಗೊತ್ತು . ಕೆಲವೊಂದು ಭಾವಗಳನ್ನು ಅನುಭವಿಸುವುದು ಸುಲಭವಲ್ಲ, ಆದರೆ ಅನುಭವಿಸದೇ ಉಪಾಯವಿಲ್ಲ .. ಜೀವನ ಸಹಜ ಸ್ಥಿತಿಗೆ ಮರಳ ಬೇಕೆಂದೆರೆ ನೆನಪುಗಳು ಸಹ್ಯ ಎನಿಸುವ ಸ್ಥಿತಿಯನ್ನು ತಲುಪಲೇ ಬೇಕು .ಬದುಕಲು  ಭರವಸೆ ಬೇಕು ಹಾಗು  ಅದನ್ನು ನಾವೇ ಹುಡುಕಿಕೊಳ್ಳಬೇಕು. ನಮ್ಮ ಬದುಕು ನಮ್ಮ ಜವಾಬ್ಧಾರಿ . ಮುರಿದು ಬಿದ್ದ ಮನ ಮರದ ಕೊರಡು ಆದಷ್ಟು ಬೇಗ ಚಿಗುರಲಿ .. ಹೊಸ ವಸಂತ ಬರಲಿ  

Friday, 18 March 2016

ಯಾವ ಜನ್ಮದ ಮೈತ್ರಿ 


ಅವನು ತುಂಬಾ ಇಷ್ಟಪಟ್ಟು ತಂದಿದ್ದ ಹೂಕುಂಡ, ಖಾಲಿಯಾಗಿ ಕುಳಿತಿತ್ತು .. ಎಷ್ಟು ಹುಡುಕಿದರೂ ಮನಸ್ಸಿಗೊಪ್ಪುವ ಗಿಡ ಸಿಗುತ್ತಲೇ ಇರಲಿಲ್ಲ 
. ಒಮ್ಮೆ ಏನೋ ಕೆಲಸಕ್ಕೆಂದು ಹೊರಟಿದ್ದವನಿಗೆ  ಆ ಗಿಡ ಕಣ್ಣಿಗೆ ಬಿತ್ತು . ಅದರ ಬಣ್ಣ ,ಅದರ ಹೊಳಪು "ಅರೆರೆ !!ಇಂತಹ  ಅದ್ಭುತಕ್ಕಾಗಿಯೇ ಅಲ್ಲವೇ ಇಷ್ಟು ದಿನ ಕಾದಿದ್ದು , ಹುಡುಕಾಡಿದ್ದು ??" ಸಂತಸಂದಿದ ಬೀಗಿದ .. 
"ಎಷ್ಟಪ್ಪಾ ಈ ಗಿಡಕ್ಕೆ ?"
" ಸಾ .. ಇದೇ ಯಾಕೆ ಸಾ ? ನೀರು ,ಬಿಸಿಲು ,ಮಣ್ಣು ಎಲ್ಲಾ ಹದವಾಗಿ ಬೀಳ್  ಬೇಕು ಇದಕ್ಕೆ ... ನೋಡ್ಕೊಳೋದು ಬಾಳ  ಕಷ್ಟ " ಎಂದನವ ಹಲ್ಲು ಗಿಂಜುತ್ತ . 
" ಅರೇ !!ಏನೂ ಅಂಥ ಮಾತಾಡ್ತಾ ಇದ್ಯಪ್ಪ ?ಇಷ್ಟು ಚೆನ್ನಾಗಿರೋ ಸೃಷ್ಟಿಗೊಸ್ಕರ ಏನು ಬೇಕಾದ್ರೂ ಮಾಡ್ತೀನಿ.. ಬೇಗ ಕೊಡು "ಎಂದ, ಪಕಳೆಗಳನ್ನು ಮೃದುವಾಗಿ ಸ್ಪರ್ಶಿಸುತ್ತಾ . ಗಿಡ ನಾಚಿ  ತಲೆ ಬಾಗಿ ಸಮ್ಮತಿಸಿತು ನಗುತ್ತಾ 
ಖಾಲಿಯಾಗಿದ್ದ ಹೂಕುಂಡದಲ್ಲಿ ಈಗ ನಿತ್ಯ ಚೈತ್ರ .. ನಳ ನಳಿಸುವ ಹೂಗಳು ,ಮೊಗ್ಗುಗಳು .. 
ದಿನಕ್ಕೆ ಎರಡು ಬಾರಿ ನೀರು , ಬಿಸಿಲು . ಅದರ ಹೂಗಳನ್ನು ನೇವರಿಸುತ್ತ "ನೀನಿರದಿದ್ದ ಬದುಕು ಬದುಕೇ ಆಗಿರಲಿಲ್ಲ "ಎಂದಾಗ ಗಿಡ ನಕ್ಕು  "ನಿನ್ನಿಂದಲೇ  ತಾನೇ ನನ್ನ ಬದುಕಲ್ಲಿ ಇಂದು ಇಷ್ಟು ಸಂಭ್ರಮ " ಎಂದು ಉಲಿಯುತ್ತಿತ್ತು . 
ದಿನಗಳು ಕಳೆದವು. ಅವನೀಗ  ಬದುಕಿನ  ಜಂಜಾಟದಲ್ಲಿ ವ್ಯಸ್ತ .. ದಿನಕ್ಕೊಂದು ಬಾರಿ ನೀರು.. ಯಾವಾಗಲೋ ಒಂದು ಮುತ್ತು ...ಗಿಡ " ಇಲ್ಲಿ ಕೇಳು .." ಎಂದಾಗೆಲ್ಲ "ಈಗಲ್ಲ ..ಬರ್ತೀನಿ  ಇರು " ಎನ್ನುವ ಉತ್ತರ . 
ಅವನ ನಿರ್ಲಕ್ಷ್ಯದಿಂದ ಗಿಡ ಸೊರಗುತ್ತ ಹೋಯಿತು. ಒಂದು ದಿನ ಬಂದವನೇ " ಏನಿದು ??ಒಂದೂ ಹೂವಿಲ್ಲ ?ಎಲ್ಲಿ ಹೋದವು ನಿನ್ನ ಬಣ್ಣಗಳು ?"ಕೇಳಿದ 
ಅವನ ಸಾಮಿಪ್ಯ ಒಂದೇ ಬೇಕಿತ್ತು ಆ ಗಿಡಕ್ಕೆ  " ನಿನ್ನ ಕೊರತೆ ನೋಡು ನನ್ನನ್ನು ಹೇಗೆ ಬಡವಾಗಿಸಿದೆ ?ಹೂಗಳಿಗೇನು ,ಅರಳೇ ಅರಳುತ್ತವೆ .. ನೀನಿರು ಜೊತೆಗೆ..ಸಾಕು "ಉತ್ತರಿಸಿತು
"ಏನು ನಿನ್ನ ಮಾತಿನ ಅರ್ಥ? ಸದಾ ನಿನ್ನನ್ನೇ ಆರಾದಿಸುತ್ತ ,ನಿನ್ನ ಜೊತೆಯೇ ಇರಬೇಕೆನು ?ಜೀವನ ಸಾಗುವುದು ಬೇಡವೆ?"ಎಂದ ದರ್ಪದಿಂದ. 
ನೀನೊಂದು ಅದ್ಭುತ ಎಂದು ಹಾಡಿಹೊಗಳುತ್ತಿದ್ದವನ ದರ್ಪಕ್ಕೆ ಗಿಡ ದಂಗಾಯಿತು "ನೀನೀಗ ಮುಂಚಿನ ಹಾಗಿಲ್ಲ. ಆಗಲೋ ,ಈಗಲೋ ಎರಡು  ಹನಿ  ನೀರು.. ಎಂದೋ ಒಂದು ಬಿಸಿಲು.. ಮಾತಿಲ್ಲ.. ಮುದ್ದಿಲ್ಲ .. ನಾನೇಕೆ ಬೇಡವಾದೆ ?" ಪ್ರಶ್ನಿಸಿತು ಕಣ್ಣು ತುಂಬಿಕೊಂಡು . 
ಅವನು ಉಡಾಫೆಯಿಂದ "ನಿನಗೋ ದಿನ ಪೂರ್ತಿ ನಿನ್ನೊಡನೆ ಇದ್ದರೂ ಸಾಲದು. ಹೂ ಕುಂಡ  ಅಲಂಕರಿಸು ಎಂದರೆ ನೋಡು ಹೇಗೆ ಅದರ ಅಂದಗೆಡಿಸಿದ್ದೀಯ ?ಅದರ ಜೊತೆಗೆ ನಿನ್ನ ಬೇಡಿಕೆಗಳು.. ದೋಷಾರೋಪಣೆಗಳು. ಇಲ್ಲ ಇನ್ನು ನಿನ್ನನ್ನು ತಲೆಯ ಮೇಲೆ ಹೊತ್ತುಕೊಳ್ಳಲಾಗದು"ಎಂದವನೇ ಗಿಡವನ್ನು ಹೂ ಕುಂಡದಿಂದ ಕಿತ್ತು ಬೇರೆ ಗಿಡಗಳೊಡನೆ ಹಿತ್ತಲಿನಲ್ಲಿ ನೆಟ್ಟ .. ಗಿಡ ಗೊಗರೆಯಿತು.. " ನೀನಿಲ್ಲದೆ ಬದುಕಿಲ್ಲ .. ಬಿಟ್ಟು ಹೋಗಬೇಡ ನನ್ನನ್ನು .. " ಊಹೂ!!! ಅವನು ಕರಗಲಿಲ್ಲ...   ಅಲ್ಲೇ ಕಳೆಗಳ ಮಧ್ಯ ಒದ್ದಾಡಿತು ಆ ಗಿಡ..  ಹೋದವನು ಬಂದೇ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಮೂರು  ದಿನ ಕಾದು ....  ನರಳಿ ಕೊನೆಗೆ ಸತ್ತು ಹೋಯಿತು. 
ಇಲ್ಲಿ "ಅವನು " ಕೇವಲ ಸಾಂಕೇತಿಕ ಅಷ್ಟೇ.. ಅವನು ಅವಳು ಇಬ್ಬರೂ ಆಗಬಹುದು . 
ನಮ್ಮಲ್ಲಿ ಹಲವರ "ಪ್ರೀತಿ"ಯ ಜೀವನ ಚಕ್ರ ಹೀಗೆ ಇರುತ್ತದೆ ಅಲ್ವಾ?ಊಹಿಸಿಯೆ ಇರದ ಸಂದರ್ಭದಲ್ಲಿ , ಯಾವುದೋ ವಿಚಿತ್ರ ಸನ್ನಿವೇಶದಲ್ಲಿ ಪ್ರೀತಿಗೆ ಬಿದ್ದು ಬಿಡುತ್ತೇವೆ . ಅವಳ ಕೆನ್ನೆಯ ಹೊಳಪು,ಅವನ ದನಿಯ ಮಾದಕತೆ ,ಅವಳ ನಿಷ್ಕಲ್ಮಶ ನಗು ,ಅವನ ಮೋಹಕ ನೋಟ.. ಹೀಗೆ ಶುರುವಾಗುತ್ತೆ.  ಪ್ರೀತಿ ಮೊಳೆತಾಗ ಅಲ್ಲಿ ಭಾವನೆಗಳದ್ದೆ ಕಾರುಬಾರು.. ಈ ಭಾವ ತೀವ್ರತೆಯಲ್ಲಿ ಹುಟ್ಟುವ ಕವಿತೆಗಳೆಷ್ಟೋ? ಚಿಗುರುವ ಕನಸುಗಳೆಷ್ಟೋ ?ಒಟ್ಟಿಗೆ ಕೇಳುವ ಹಾಡುಗಳೆಷ್ಟೋ ?ಮೊದಲ ಸಂಬಳದಲ್ಲಿ ಅವಳಿಗೊಂದು ಗಿಫ್ಟ್ ?ವಾರದಲ್ಲಿ ಮೂರು ಸರಿ ಅವನ ಇಷ್ಟದ ಡ್ರೆಸ್ !!ಏನೇ ಮಾಡಿದರೂ ಅದರಲ್ಲೊಂದು ಧನ್ಯತಾ ಭಾವ...  ಎಷ್ಟೆಲ್ಲಾ ಸುಂದರ ಕಲ್ಪನೆಗಳು  .."ನಮ್ಮ ಮದುವೆ ಹೀಗಿರಬೇಕು", "ನನಗೆ ಮೊದಲನೆಯದು ಹೆಣ್ಣು ಮಗುವೆ ಬೇಕು", "ನಿನ್ನ ಒಂದು ದಿನಾನು ಬಿಟ್ಟಿರಲ್ಲ.. ಈಗ್ಲೇ ಹೇಳಿದೀನಿ ನೋಡು ಅಮ್ಮನ ಮನೆಗೂ ಕಳ್ಸಲ್ಲ " ಬೆಸೆದ ಬೆರಳುಗಳು .. ನೂರಾರು ಆಶ್ವಾಸನೆಗಳು .. ಅಲ್ಲಿ  ತಕರಾರುಗಳೂ  ಸುಂದರ ..ನೀನೊಬ್ಬ ಜೊತೆಗಿರು ,ಇಡೀ ಪ್ರಪಂಚಾನೇ ಎದರಿಸ್ತೀನಿ   ಅನ್ನುವ ಭರವಸೆಗಳು. ಆಹ !ಅದೊಂದು  ತಾವೇ ಸೃಷ್ಟಿಸಿಕೊಂಡ  ಅದ್ಭುತ ಲೋಕ ..  ಆದರೆ .... 
ನಿಧಾನಕ್ಕೆ ಭಾವನೆಗಳ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತೆ.. ಪ್ರೀತಿ ಹಾಗು ಬದುಕನ್ನು ತೂಗಿಸಿಕೊಂಡು ಹೋಗುವ ಅನಿವಾರ್ಯತೆ ಬರುತ್ತದೆ  .. ದಿನಗಳು ಕಳೆದಂತೆ  ಪ್ರೀತಿಯ ರಾಗದಲ್ಲಿ ಅಲ್ಲೊಂದು ಇಲ್ಲೊಂದು ಅಪಸ್ವರ." ನೀನು ಬದಲಾಗಿದ್ಯ , ನೀನು ಯಾವಾಗ್ಲೂ ಮಗು ಥರ ಆಡೋದನ್ನ ನಿಲ್ಲ್ಸು, ನಿಂಗೆ ನನ್ ಮೇಲೆ ನಂಬಿಕೇನೆ ಇಲ್ಲ, ನೀನು ಯಾವತ್ತು ನನ್ನ ಪ್ರೀತಿ ಮಾಡೇ ಇಲ್ಲ"ಗಳು  ಕೇಳಲು ಶುರುವಾಗುತ್ತೆ . "ಅದರರ್ಥ ಗಿರ್ಥಗಳು ಸೃಷ್ಟಿಕರ್ಥನಿಗಿರಲಿ" ಎಂದು ನಿರ್ಲಕ್ಷಿಸಿದ್ದ ಪ್ರಶ್ನೆಗಳೆಲ್ಲ "ದುತ್ ! ಎಂದು ಕಣ್ ಮುಂದೆ ಬಂದು ನಿಲ್ಲುತ್ತದೆ, ದುಃಸಪ್ನವಾಗಿ ಕಾಡಲು ಶುರು ಮಾಡುತ್ತದೆ  . ಜವಾಬ್ಧಾರಿ ಅಂದುಕೊಂಡಿದ್ದೆಲ್ಲ  ಈಗ ಹೊರೆ ಎನಿಸಲು ಶುರುವಾಗುತ್ತದೆ . ಅಮ್ಮನಂತಹ ಗೆಳೆಯನ ಅಸಡ್ಡೆ ಇವಳಿಗೆ ಸಹಿಸಿಕೊಳ್ಳಲಾಗುವುದಿಲ್ಲ.. ಮಗುವಿನಂತಹ ಗೆಳತಿಯ ಅಭದ್ರತೆಗಳು ಇವನಿಗೆ ಉಸಿರುಗಟ್ಟಿಸತೊಡಗುತ್ತದೆ. 
ಇಲ್ಲಿ ತಪ್ಪು ಯಾರದ್ದು? ಹೀಗಾಗಲು ಕಾರಣ ಏನು ? ಪ್ರೀತಿಯಲ್ಲಿದ್ದ ಮಾತ್ರಕ್ಕೆ ಬೇರೆ ಎಲ್ಲವನ್ನು ಮರೆತೇ ಬಿಡಬೇಕ? ಅವ್ನು ಹೀಗೆ ಬದಲಾಗಿದ್ದು ಸರಿನಾ ?ಅವಳಿಗೆ ಯಾಕೆ ನನ್ನ ಮೇಲೆ ಅಷ್ಟು ಅಪನಂಬಿಕೆ? ಹೀಗೆ ಏಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಅವರಿಬ್ಬರಲ್ಲೇ ಇರುತ್ತದೆ ಮತ್ತು ಅವರಿಬ್ಬರಲ್ಲಿ ಮಾತ್ರ ಇರುತ್ತದೆ . 
ಆದರೆ ಒಂದಂತು ನಿಜ . ಪ್ರೀತಿಯಲ್ಲಿ ಬೀಳುವುದೇನು ದೊಡ್ಡ ವಿಷಯವಲ್ಲ ,ಆದರೆ ಪ್ರೀತಿಯಲ್ಲಿ ಇರುವುದು, ಪ್ರೀತಿಯಲ್ಲಿ ಬೆಳೆಯುವುದು  ಇದ್ಯಲ್ಲಾ ಅದೊಂದು ದೊಡ್ಡ ಪರೀಕ್ಷೆ .ಪ್ರೀತಿ ಒಂದು ನಿರಂತರ ಕ್ರಿಯೆ!! ಅದನ್ನು ನಿಲ್ಲಿಸಲೇ ಬಾರದು.... ಸಂಬಂಧ ಹದಗೆಡುತ್ತಿರುವ ಸೂಚನೆ ಸಿಕ್ಕ ತಕ್ಷಣ ಎಚ್ಚೆತ್ತು ಕೊಳ್ಳಬೇಕು.. ನಿಜ ಹಾಗಂತ  ಪ್ರೀತಿಯೊಂದೆ ಎಲ್ಲವು ಅಲ್ಲ ..ಕೇವಲ ಕನಸು ಕಾಣುವುದು ಮಾತ್ರ ಜೀವನ ಅಲ್ಲ!! ನಂಬಿಕೆಗಳ ತಳ ಒಡೆಯದಂತೆ ನೋಡಿಕೊಳ್ಳುವ ಜವಾಬ್ಧಾರಿ ಇಬ್ಬರದ್ದೂ. ತುಂಬಾ ತಾಳ್ಮೆಯಿಂದ ಕೂತು ,ಅಹಂ ಬಿಟ್ಟು  ಮಾತಾಡಿ ನೋಡಿ,ಆಮೇಲೆ ಇಂತ ಪ್ರಶ್ನೆಗಳ ಹುಟ್ಟಿಗೆ ಆಸ್ಪದವೇ ಇರುವುದಿಲ್ಲ! ಇಷ್ಟು ದಿನ ನೀರು ಹಾಕಿ ನೋಡಿಕೊಂಡಿಲ್ಲ್ವ ??ಅನ್ನುವ ದರ್ಪಕ್ಕೆ ಇಲ್ಲಿ ಜಾಗವಿಲ್ಲ   .. ಒಂದು ಹಂತದವರೆಗೆ ಅದನ್ನು ಜತನವಾಗಿ ನೋಡಿಕೊಳ್ಳಬೇಕು .. ಒಮ್ಮೆ ಅದರ ಬೇರು ಆಳವಾಗಿ ,ಕಾಂಡ  ಭದ್ರವಾಗುವವರೆಗೆ ಪೊರೆದು ನೋಡಿ .. ಆಮೇಲೆ ಇಡೀ  ಜೀವನ ಅದು ನಿಮ್ಮನ್ನು ಪೊರೆಯುತ್ತದೆ.. ಜೀವನಪೂರ್ತಿ ನಿಮ್ಮ ನೆರಳಾಗಿ ಇರುತ್ತದೆ. 

Saturday, 12 March 2016

ನಾವು ನಾವಾಗಿರೋಣ ಬನ್ನಿ 

ಈ ಬದುಕುವುದು ಅಂದ್ರೆ ಏನು ? ಉಸಿರಾಡೋದು ಅಂತಾನ ? ಖುಷಿಯಾಗಿರೋದಾ? ಯಾಕೆ ಇಷ್ಟೊಂದು ವ್ಯಾಖ್ಯಾನಗಳು ಈ 'ಬದುಕು ' ಅನ್ನುವ ಶಬ್ಧಕ್ಕೆ ?ಹಲವರಿಗೆ ಕೊನೆಯವರೆಗೂ ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಅನಿವಾರ್ಯತೆ ಯಾಕೆ ಬರೋದೆ ಇಲ್ಲ.. ಹಾಗೆ ನೋಡಿದರೆ ಇಂತಹ ಪ್ರಶ್ನೆಯೂ ಒಂದಿದೆ ಅಂತ ಕೂಡ ಗೊತ್ತಿರಲ್ಲ.. ಅವರೆಲ್ಲಾ ಅದೃಷ್ಟವಂತರಾ ಇಲ್ಲಾ ದುರಾದೃಷ್ಟವಂತರಾ ??ಎಲ್ಲರ ಹುಟ್ಟಿಗೂ ಒಂದು ಉದ್ದೇಶ ಇರುತ್ತಾ ?ಆ ಉದ್ದೇಶದ ಸಾರ್ಥಕತೆಯೇ ಬದುಕಾ?
life is beautiful ..life  is a teacher.. you are my life ಎನ್ನುವ ಅನುಭವಗಳ ಮೂಲ ಯಾವುದು ಅಂತ ಹುಡುಕುವ ಆಸೆ ಬಂದಿದೆ.. ಸಂತೋಷವಾದಾಗ life is beautiful.. ದುಃಖವಾದಾಗ life  is a teacher... ಅನ್ನೋದಾದರೆ, ನಮ್ಮ ಮನಸ್ಥಿತಿ ಅನ್ನೋದೇ ಬದುಕಾ ?ಬದುಕಿಗೆ ಬೇರೆ ಅಸ್ತಿತ್ವವೇ ಇಲ್ವಾ ಹಾಗಿದ್ರೆ?
ಈ ಉತ್ತರ ಹುಡುಕುವ ಹಠಕ್ಕೆ ಬಿದ್ದಮೇಲೆ ಒಂದಂತೂ ಅರಿವಾಗಿದೆ..." ನಾನೇ ನನ್ನ ಬದುಕು..ನನ್ನನು ನಾನು ಅರಿತರೆ ಬದುಕನ್ನು ಅರಿತಂತೆ  "!ಇಲ್ಲ!!ಹೇಳಿದಷ್ಟು ಸುಲಭವಿಲ್ಲ  ..ಇದು ಎಷ್ಟು ಸರಳವೋ ಅಷ್ಟೇ ಜಟಿಲ .. ಇಲ್ಲಿಂದ ಗೊಂದಲಗಳು ಶುರುವಾಗುತ್ತವೆ .. "ನನ್ನನ್ನು" ತಲುಪಲು ನೂರಾರು ಮಜಲುಗಳು.. . ಸುತ್ತಲಿನ ಜಗತ್ತು ಅರ್ಥಹೀನ ಅನ್ನಿಸಲು ಶುರುವಾಗುತ್ತದೆ ..ಇಲ್ಲಿಯವರೆಗೆ ಒಪ್ಪಿಕೊಂಡು  ಪಾಲಿಸಿಕೊಂಡು ಬಂದಿದ್ದ ಧರ್ಮ ,ಆದರ್ಶ ,ಸಮಾಜ ,ಬೇರೆಯವರ ಅನುಭವಗಳ ಮೇಲೆ ಒಪ್ಪಿಕೊಳ್ಳಲ್ಪಟ್ಟ ಕಾನೂನುಗಳು ಹೇರಿಕೆ ಅನ್ನಿಸ ತೊಡಗುತ್ತದೆ.
ನಮ್ಮ "ಅಸ್ತಿತ್ವ" ಅಗಾದ  ಅನುಭವಗಳ ಸಂಗ್ರಹ.. ಇವತ್ತಿನ "ನಾನು" ಎಷ್ಟೊಂದು ಘಟನೆಗಳ ಫಲಿತಾಂಶ ! ಹುಟ್ಟಿದಾಗಿನಿಂದ ಎಷ್ಟೊಂದು ಜನರು , ಎಷ್ಟೊಂದು ಘಟನೆಗಳು,  ಆಯ್ಕೆಗಳು , ಸೋಲುಗಳು ,ಗೆಲುವುಗಳು ,ಭಯಗಳು "ನಮ್ಮನ್ನು " ರೂಪಿಸಿರುತ್ತವೆ ಅಲ್ವಾ ? ನಮಗೇ ಗೊತ್ತಿಲ್ಲದ ಹಾಗೆ ನೂರಾರು ಅನುಭವಗಳು ನಮಗಾಗಿ ಒಂದು ಬದುಕನ್ನು ಹೆಣೆಯುತ್ತಾ  ಹೋಗುತ್ತದೆ. ನಮ್ಮಂಥಹ  ಇನ್ನೂ ಒಂದಷ್ಟು ಅನುಭವಗಳ ಮೂಟೆಗಳ ಜೊತೆ ಸೇರಿ,ಸಮಾಜ ಎನ್ನುವ ವ್ಯವಸ್ಥೆಯೊಳಗೆ ಸೇರಿ ಹೋಗ್ತ್ತೇವೆ .. ಅಲ್ಲಿಂದ ಸಮಸ್ಯೆಗಳು ತೀವ್ರವಾಗುತ್ತ ಹೋಗುತ್ತವೆ. ಅಲ್ಲಿಂದ ಎಲ್ಲವೂ ಸಮಾಜದ ತೀರ್ಪಿನ ಮೇಲೆ ನಿರ್ಧರಿಸಲ್ಪಡುತ್ತದೆ ... "ಸಮಾಜದಲ್ಲಿ ತಲೆ ಎತ್ತ್ಕೊಂಡು ಓಡಾಡಬೇಕು " " ನಾಲ್ಕು ಜನ ನಮ್ಮನ್ನ  ಹೊಗಳಬೇಕು " .ಹೀಗೆ ನಾವೇ  ಸೃಷ್ಟಿಸಿಕೊಂಡ ಸಮಾಜದಲ್ಲಿ..ನಾವೇ ಬಂಧಿಗಳಾಗುತ್ತೇವೆ ..ಇದು ನಮ್ಮದೇ ಸೃಷ್ಟಿ ಅನ್ನುವುದನ್ನೂ ಮರೆತು ಅದರ ಗುಲಾಮರಾ ಗಿಬಿಡುತ್ತೇವೆ..  ಸರಿ ತಪ್ಪುಗಳ ಅಂತರವೇ ಗೊತ್ತಿರದೇ ಯಾರದೋ ಅನುಭವಗಳನ್ನು ಸತ್ಯವೆಂದೂ , ಅದನ್ನೆಂದೂ ಪ್ರಶ್ನಿಸಬಾರದೆಂದೂ ನಮಗೆ ತಾಕೀತು ಮಾಡಲಾಗಿರುತ್ತದೆ .. ಹೀಗೆ ಅದು ಮುಂದಿನ ಪೀಳಿಗೆಗೂ ವರ್ಗಾವಣೆಯಾಗುತ್ತದೆ..    ಹಾಗಂತ ನಾನು ವ್ಯವಸ್ಥೆಯ ವಿರೋಧಿ ಅಲ್ಲ ... ನನ್ನ ಪ್ರಶ್ನೆ ಸಮಾಜದ  ಹೆಸರಿನಲ್ಲಿ ನಡೆಯುವ ಶೋಷಣೆಗೆ..!
"ಇಲ್ಲಿಯವರೆಗೆ ನಮ್ಮಲ್ಲಿ ಯಾರು ಅಂತರ್ಜಾತಿ ಮದುವೆ ಆಗಿಲ್ಲ ಹಾಗು ಅದನ್ನು ನಮ್ಮ ಸಮಾಜ ಒಪ್ಪಿಕೊಳ್ಳುವುದಿಲ್ಲ "ಎಂದೋ ಅಥವಾ "ಇಷ್ಟೆಲ್ಲಾ ಖರ್ಚು ಮಾಡಿ, ಇಂಜಿನಿಯರ್ ಮಾಡಿದ್ರೆ ಆಕ್ಟರ್ ಆಗ್ತೀನಿ ಅಂತ್ಯಲ ? ಸೋಶಿಯಲ್ ಸ್ಟೇಟಸ್ ಬಗ್ಗೆ ಯೋಚ್ಸಿದ್ಯಾ?" ಎಂದೋ  ಸಮಾಜವನ್ನು ಎಳೆದು ತರುತ್ತಲೇ ಇರುತ್ತೇವೆ .. ನಮ್ಮನ್ನು ಪೋಷಿಸ ಬೇಕಾದ ಸಮಾಜ ನಮ್ಮ ಕನಸುಗಳನ್ನು ಕೊಲ್ಲುತ್ತಾ ಹೋಗುತ್ತದೆ .. ಇದಕ್ಕೆ ಹೊಣೆ ಯಾರು ?ನಾವೇ ಅಲ್ವಾ? ಕೇವಲ ಹಳೆಯ  ಅನುಭವಗಳೇ ಬದುಕು ಅಲ್ಲ ಅಲ್ವಾ? ಒಂದು ಜೀವವನ್ನು ಸೃಷ್ಟಿ ಮಾಡುವ ಶಕ್ತಿ ಇರುವ ಮನುಷ್ಯನಿಗೆ ಹೊಸ ಅನುಭವಗಳನ್ನು ಸೃಷ್ಟಿಸಿಕೊಳ್ಳಲು ಸಮಾಜದ ಒಪ್ಪಿಗೆಯ ಮೊಹರಿನ ಅವಶ್ಯಕತೆಯಾದರೂ ಏಕೆ ಬೇಕಾಗುತ್ತೆ?
ಒಮ್ಮೆ ಈ ಸಮಾಜದ ಪರಿಧಿಯಿಂದ ಹೊರಬಂದು ಯೋಚಿಸೋಣ.. ಈ ಎಲ್ಲ ಹೇರಿಕೆಗಳಿಂದ ಒಮ್ಮೆ ನಮ್ಮನ್ನು ಮುಕ್ತಗೊಳಿಸಿಕೊಳ್ಳುವ ಬಗ್ಗೆ ಯೋಚಿಸೋಣ.. ಸರಿ ಅಲ್ಲ ಅನ್ನಿಸಿದ್ದನ್ನು ಪ್ರಶ್ನೆ ಮಾಡಿ ನೋಡೋಣ... " ನಮ್ಮನ್ನು" ನಾವಗಿಸಿಯೇ ಇಟ್ಟುಕೊಳ್ಳಲು ಒಮ್ಮೆ ಪ್ರಯತ್ನಿಸೋಣ .. ಹಾಗೆ ಸಾವಿರಾರು "ನಾನು " ಬೆಳೆಯಲು ಅವಕಾಶ ಕಲ್ಪಿಸಿಕೊಡೋಣ .. ಬರಿ ಇಂಥಹ ಒಂದು ಕಲ್ಪನೆಯೇ ಎಷ್ಟು ಹಿತ ಕೊಡುತ್ತೆ ಅಲ್ವಾ?

Wednesday, 9 March 2016

ನೀರಜ ನೋಡಿದಾಗ ಅನಿಸಿದ್ದು 

ಸೆಪ್ಟೆಂಬರ್ ೫ ರಂದು Pan Am Flight 73 ದುರಂತದಲ್ಲಿ,೩೬೦ ಜನರ ಪ್ರಾಣ ಉಳಿಸಲು ತನ್ನ ಜೀವವನ್ನು ಬಲಿ ಕೊಟ್ಟ೨೨ ವರ್ಷದ  ದಿಟ್ಟ flight attendant  ಒಬ್ಬಳ ಕಥೆ.. ಹೌದು ..ಮೈ ಝುಮ್ ಎನ್ನಿಸುವ ಕಥೆ ... ಅವಳ ಧೈರ್ಯಕ್ಕೆ ,ತ್ಯಾಗಕ್ಕೆ  ಒಂದು ಸಲಾಂ !! "ನಾನು ಅವಳ ಜಾಗದಲ್ಲಿದ್ದಿದ್ದರೆ" ಅನ್ನುವ ಪ್ರಶ್ನೆಯನ್ನು ಕೇಳಿ ಕೊಳ್ಳುವ ಧೈರ್ಯ ಕೂಡ ಬಹುಶಃ ನನ್ನಲ್ಲಿಲ್ಲ ! ನನ್ನನು ಕಾಡಿದ ಹಾಗು ಎಂದೆಂದಿಗೂ ಕಾಡುವ ಇನ್ನೂ  ಒಂದು ವಿಷಯವಿದೆ .
ಮಾಡೆಲಿಂಗ್  ಮಾಡಿಕೊಂಡು ಹಾಯಾಗಿದ್ದ ನೀರಜ  ,೧೯೮೫ ರಲ್ಲಿ ತನ್ನ ೨೨ ನೇ ವಯಸ್ಸಿಗೆ ಮದುವೆಯಾಗುತ್ತಾಳೆ .. ಮದುವೆ   ಹಾಗು ಅದು ಬಯಸುವ ತ್ಯಾಗಗಳ  ಅರಿವಿಲ್ಲದೆ ,ಗಂಡನೊಡನೆ  ಸೌದಿಗೆ   ಹೋಗುತ್ತಾಳೆ.. ಕೇವಲ ೨ ತಿಂಗಳಿಗೆ ವಾಸ್ತವದ  ಅರಿವಾಗಿ ಇನ್ನು ನನ್ನಿಂದ ಇದು ಸಾಧ್ಯವಿಲ್ಲ ಎಂದು ಗಂಡನನ್ನು ಬಿಟ್ಟು ಬಂದು , flight attendant  ಆಗಿ  ತನ್ನ ಹೊಸ ಬದುಕು ಕಟ್ಟಿ ಕೊಳ್ಳುತ್ತಾಳೆ.. ಕೊನೆಗೆ ಅಲ್ಲೇ ಅಂತ್ಯವನ್ನೂ ಕಾಣುತ್ತಾಳೆ .
ಅವಳ ಮದುವೆ ಕೇವಲ ಎರಡೇ ತಿಂಗಳಲ್ಲಿ ಯಾಕೆ ಅಂತ್ಯಗೊಂಡಿದ್ದಿರಬಹುದು ? ತಪ್ಪು ಅವಳದ್ದ ಇಲ್ಲ ಅವನದ್ದ ? ಅದೆಲ್ಲದರ ಉತ್ತರ ಗೊತ್ತಿರುವುದು ಕೇವಲ ಅವರಿಬ್ಬರಿಗೆ ಮಾತ್ರ . ನನ್ನ ಪ್ರಶ್ನೆ ಈಗ ಅದಲ್ಲ... ಅಂದು ಆಕೆ ಆ ದುರಂತದಲ್ಲಿ ಸಾಯದೆ ಇದ್ದಿದ್ದರೆ ಏನಾಗಿರುತ್ತಾ  ಇತ್ತು? ಅವಳ ಬಗ್ಗೆ ಏನೆಲ್ಲಾ ಮಾತುಗಳು ಹುಟ್ಟುತ್ತಿದ್ದವು?
ಅವಳ ಅತ್ತೆ / ಚಿಕ್ಕಮ್ಮ ತಮ್ಮ ಹೆಣ್ಣು ಮಕ್ಕಳ ಕಡೆ ತರಕಾರಿಯ ತಟ್ಟೆ ತಳ್ಳುತ್ತಾ  ' ಸಾಕು ಓದಿದ್ದು ,ಬೇಗ ಹೆಚ್ಚಿ ಕೊಡು ಇದ್ನ  , ಇನ್ನು ಮನೆ ಕೆಲಸ ಕಲಿ ..ಇಲ್ದೇ ಇದ್ರೆ ನೀರಜ ಥರ ೨ ತಿಂಗಳು ನೆಟ್ಟಗೆ ಸಂಸಾರ ಮಾಡಲ್ಲ.. ' ಅಂತಾನೋ .. ಅಥವಾ  ನೀರಜಾಳ  ತಾಯಿಯ ಓರಗಿತ್ತಿ /ಅತ್ತಿಗೆ  ಬಟ್ಟೆ ಹರವಿ ಹಾಕುತ್ತ '  ಅವ್ರಮ್ಮನೂ ಹೀಗೆ ಆಡ್ತಾ ಇದ್ಲು ..ಇನ್ನೆನಾಗುತ್ತೆ.. ನೂಲಿನಂತೆ ಸೀರೆ ಅನ್ತಾರಲ  ಹಾಗೆ ' ಎಂದು ಅಸಮಾಧನದಿಂದ  ಗೊಣಗುತ್ತಲೋ .. ಅಥವಾ ನೆರೆಹೊರೆಯ ಹೆಂಗಸರು ಬಟಾಣಿ ಬಿಡಿಸುತ್ತಾ 'ನಾನು ಅವರಮ್ಮನ ಹತ್ರ ಅವತ್ತೇ ಹೇಳಿದ್ದೆ .. ಅವಳೇನೋ ಗಂಡನ್ನ ಬಿಟ್ಟು ಬಂದ್ಲು ಅಂದ್ರೆ ನಿಮ್ಗಾದ್ರು ಬುದ್ಧಿ ಬೇಡ್ವ ?ಸರಿಯಾಗಿ ಬುದ್ಧಿ ಹೇಳಿ ಕಳ್ಸಿ ಅಂತ .. ನನ್ ಮೇಲೆ ರೆಗ್ಬಿಟ್ರು .. ಮಾಡೆಲಿಂಗ್ ಅದು ಇದು ಅಂತ ಇದ್ರೆ ಇನ್ನೇನಾಗುತ್ತೆ .. ಮನೆಗೆ ಎಷ್ಟು ಲೇಟ್ ಆಗಿ ಬರ್ತಾ ಇದ್ಲು ಗೊತ್ತ?ಇನ್ನು ಬುದ್ಧಿ ಬಂದಿಲ್ಲ ಇಷ್ಟೆಲ್ಲಾ ಆದ್ರೂ .. ಈಗೇನೋ ಏರ್ ಹೋಸ್ಟೆಸ್ ಅಂತೆ ..ಬಿಡಿ  ಬೇರೆಯವರ ಸುದ್ಧಿ ನಮಗ್ಯಾಕೆ ' ಅಂತ ಇರ್ತಿದ್ರೆನೋ  .. ಅಸಲಿಗೆ ನೀರಜ ಎನ್ನುವವಳೊಬ್ಬಳು ಎಲ್ಲೋ ಸ್ವಚ್ಚಂದ ಬದುಕಿನ ಕನಸು ಕಾಣುತ್ತಾ ಇದ್ದಾಳೆ  ಎನ್ನುವ ವಿಷಯ ನನಗೆ - ನಿಮಗೆ ಗೊತ್ತಿರ್ತಾ  ಇತ್ತ??ಇಲ್ಲ ಅಲ್ವಾ?
ಅಂದು ಎಮರ್ಜೆನ್ಸಿ ಎಕ್ಸಿಟ್ನಿಂದ ಮೊದಲು ಆಕೆ ಹೊರಗೆ ಬರಬಹುದಿತ್ತು .. ಅದನ್ನು ಸಮರ್ಥನೆ ಕೂಡ ಮಾಡಿಕೊಳ್ಳ ಬಹುದಾಗಿತ್ತು .. ಆಕೆ ಹಾಗೆ ಮಾಡಲಿಲ್ಲ .. ಮೂರು ಮಕ್ಕಳ  ಜೀವ ..ತನ್ನ ಜೀವಕ್ಕಿಂತಲೂ ಅಮೂಲ್ಯ ಎನಿಸಿತ್ತು .. ಸಾವು ಕಣ್ಣ ಮುಂದಿರುವಾಗ ಇಂತಹ ನಿಸ್ವಾರ್ಥ ಮನೋಭಾವ ಕೆಚ್ಚೆದೆ ಉಳ್ಳವರಲ್ಲಿ ಮಾತ್ರ ಇರಲು ಸಾಧ್ಯ ..ಹಾಗು ಒಳ್ಳೆಯತನಕ್ಕೆ ತುಂಬಾ ಧೈರ್ಯ ಬೇಕು .ಸತ್ತ ನಂತರ  ಮೂರು ಶ್ರೇಷ್ಠ ಪ್ರಶಸ್ತಿಗಳು ಆಕೆಗೆ ದೊರಕಿದವು .. ಆಕೆ ಅಂದು ಸಾಯದೆ ಇದ್ದಿದ್ದರೆ ಕೇವಲ ಒಬ್ಬ over  ambitious ,career  oriented  divorcee  ಎನ್ನುವ ಹಣೆ ಪಟ್ಟಿ ಮಾತ್ರ ಇರುತ್ತಿತ್ತ?? ಅದೆಷ್ಟು ಸಣ್ಣ ಸಣ್ಣ ಯುದ್ಧಗಳನ್ನು ಆಕೆ ಒಬ್ಬಳೇ ಎದುರಿಸಿದ್ದಿರಬಹುದು? ನಾನು ಕೇವಲ ವಿಚ್ಛೇದಿತೆ  ಅಲ್ಲ ಎನ್ನುವುದನ್ನು ಜಗತ್ತಿಗೆ ತಿಳಿಸಿಕೊಡಲು ತನ್ನ ಸಾವಿನವರೆಗೂ ಕಾಯಬೇಕಾಯಿತ ?ಗೊತ್ತಿಲ್ಲ
ಬರಿ ಒಂದು ಘಟನೆಯಿಂದ ,ಬರಿ ಒಂದು ಸೋಲಿನಿಂದ ನಾವು ಒಬ್ಬ ವ್ಯಕ್ತಿಯ ಇಡೀ  ವ್ಯಕ್ತಿತ್ವವನ್ನೇ ಅಳೆಯಲು ಹೊರಡುತ್ತೇವೆ .. ಅವನಿಗೊಂದು ಹಣೆಪಟ್ಟಿ ಹಚ್ಹ್ವ್ಹಿ ಬಿಡುತ್ತೇವೆ .. ತೇಜೋವಧೆಯಂತಹ ತಣ್ಣನೆ ಕ್ರೌರ್ಯಕ್ಕೆ ಇಳಿದುಬಿಡುತ್ತೇವೆ .. ನಮಗೇ  ಗೊತ್ತಿಲ್ಲದೇ ಒಬ್ಬನ ಆತ್ಮವಿಶ್ವಾಸವನ್ನು  ಕೊಂದ ಕೊಲೆಗಾರಾಗಿಬಿಡುತ್ತೇವೆ.. ಬದುಕೋಣ ..ಬದುಕಲು ಬಿಡೋಣ..