ಯಾವ ಜನ್ಮದ ಮೈತ್ರಿ
ಅವನು ತುಂಬಾ ಇಷ್ಟಪಟ್ಟು ತಂದಿದ್ದ ಹೂಕುಂಡ, ಖಾಲಿಯಾಗಿ ಕುಳಿತಿತ್ತು .. ಎಷ್ಟು ಹುಡುಕಿದರೂ ಮನಸ್ಸಿಗೊಪ್ಪುವ ಗಿಡ ಸಿಗುತ್ತಲೇ ಇರಲಿಲ್ಲ
. ಒಮ್ಮೆ ಏನೋ ಕೆಲಸಕ್ಕೆಂದು ಹೊರಟಿದ್ದವನಿಗೆ ಆ ಗಿಡ ಕಣ್ಣಿಗೆ ಬಿತ್ತು . ಅದರ ಬಣ್ಣ ,ಅದರ ಹೊಳಪು "ಅರೆರೆ !!ಇಂತಹ ಅದ್ಭುತಕ್ಕಾಗಿಯೇ ಅಲ್ಲವೇ ಇಷ್ಟು ದಿನ ಕಾದಿದ್ದು , ಹುಡುಕಾಡಿದ್ದು ??" ಸಂತಸಂದಿದ ಬೀಗಿದ ..
"ಎಷ್ಟಪ್ಪಾ ಈ ಗಿಡಕ್ಕೆ ?"
" ಸಾ .. ಇದೇ ಯಾಕೆ ಸಾ ? ನೀರು ,ಬಿಸಿಲು ,ಮಣ್ಣು ಎಲ್ಲಾ ಹದವಾಗಿ ಬೀಳ್ ಬೇಕು ಇದಕ್ಕೆ ... ನೋಡ್ಕೊಳೋದು ಬಾಳ ಕಷ್ಟ " ಎಂದನವ ಹಲ್ಲು ಗಿಂಜುತ್ತ .
" ಅರೇ !!ಏನೂ ಅಂಥ ಮಾತಾಡ್ತಾ ಇದ್ಯಪ್ಪ ?ಇಷ್ಟು ಚೆನ್ನಾಗಿರೋ ಸೃಷ್ಟಿಗೊಸ್ಕರ ಏನು ಬೇಕಾದ್ರೂ ಮಾಡ್ತೀನಿ.. ಬೇಗ ಕೊಡು "ಎಂದ, ಪಕಳೆಗಳನ್ನು ಮೃದುವಾಗಿ ಸ್ಪರ್ಶಿಸುತ್ತಾ . ಗಿಡ ನಾಚಿ ತಲೆ ಬಾಗಿ ಸಮ್ಮತಿಸಿತು ನಗುತ್ತಾ
ಖಾಲಿಯಾಗಿದ್ದ ಹೂಕುಂಡದಲ್ಲಿ ಈಗ ನಿತ್ಯ ಚೈತ್ರ .. ನಳ ನಳಿಸುವ ಹೂಗಳು ,ಮೊಗ್ಗುಗಳು ..
ದಿನಕ್ಕೆ ಎರಡು ಬಾರಿ ನೀರು , ಬಿಸಿಲು . ಅದರ ಹೂಗಳನ್ನು ನೇವರಿಸುತ್ತ "ನೀನಿರದಿದ್ದ ಬದುಕು ಬದುಕೇ ಆಗಿರಲಿಲ್ಲ "ಎಂದಾಗ ಗಿಡ ನಕ್ಕು "ನಿನ್ನಿಂದಲೇ ತಾನೇ ನನ್ನ ಬದುಕಲ್ಲಿ ಇಂದು ಇಷ್ಟು ಸಂಭ್ರಮ " ಎಂದು ಉಲಿಯುತ್ತಿತ್ತು .
ದಿನಗಳು ಕಳೆದವು. ಅವನೀಗ ಬದುಕಿನ ಜಂಜಾಟದಲ್ಲಿ ವ್ಯಸ್ತ .. ದಿನಕ್ಕೊಂದು ಬಾರಿ ನೀರು.. ಯಾವಾಗಲೋ ಒಂದು ಮುತ್ತು ...ಗಿಡ " ಇಲ್ಲಿ ಕೇಳು .." ಎಂದಾಗೆಲ್ಲ "ಈಗಲ್ಲ ..ಬರ್ತೀನಿ ಇರು " ಎನ್ನುವ ಉತ್ತರ .
ಅವನ ನಿರ್ಲಕ್ಷ್ಯದಿಂದ ಗಿಡ ಸೊರಗುತ್ತ ಹೋಯಿತು. ಒಂದು ದಿನ ಬಂದವನೇ " ಏನಿದು ??ಒಂದೂ ಹೂವಿಲ್ಲ ?ಎಲ್ಲಿ ಹೋದವು ನಿನ್ನ ಬಣ್ಣಗಳು ?"ಕೇಳಿದ
ಅವನ ಸಾಮಿಪ್ಯ ಒಂದೇ ಬೇಕಿತ್ತು ಆ ಗಿಡಕ್ಕೆ " ನಿನ್ನ ಕೊರತೆ ನೋಡು ನನ್ನನ್ನು ಹೇಗೆ ಬಡವಾಗಿಸಿದೆ ?ಹೂಗಳಿಗೇನು ,ಅರಳೇ ಅರಳುತ್ತವೆ .. ನೀನಿರು ಜೊತೆಗೆ..ಸಾಕು "ಉತ್ತರಿಸಿತು
"ಏನು ನಿನ್ನ ಮಾತಿನ ಅರ್ಥ? ಸದಾ ನಿನ್ನನ್ನೇ ಆರಾದಿಸುತ್ತ ,ನಿನ್ನ ಜೊತೆಯೇ ಇರಬೇಕೆನು ?ಜೀವನ ಸಾಗುವುದು ಬೇಡವೆ?"ಎಂದ ದರ್ಪದಿಂದ.
ನೀನೊಂದು ಅದ್ಭುತ ಎಂದು ಹಾಡಿಹೊಗಳುತ್ತಿದ್ದವನ ದರ್ಪಕ್ಕೆ ಗಿಡ ದಂಗಾಯಿತು "ನೀನೀಗ ಮುಂಚಿನ ಹಾಗಿಲ್ಲ. ಆಗಲೋ ,ಈಗಲೋ ಎರಡು ಹನಿ ನೀರು.. ಎಂದೋ ಒಂದು ಬಿಸಿಲು.. ಮಾತಿಲ್ಲ.. ಮುದ್ದಿಲ್ಲ .. ನಾನೇಕೆ ಬೇಡವಾದೆ ?" ಪ್ರಶ್ನಿಸಿತು ಕಣ್ಣು ತುಂಬಿಕೊಂಡು .
ಅವನು ಉಡಾಫೆಯಿಂದ "ನಿನಗೋ ದಿನ ಪೂರ್ತಿ ನಿನ್ನೊಡನೆ ಇದ್ದರೂ ಸಾಲದು. ಹೂ ಕುಂಡ ಅಲಂಕರಿಸು ಎಂದರೆ ನೋಡು ಹೇಗೆ ಅದರ ಅಂದಗೆಡಿಸಿದ್ದೀಯ ?ಅದರ ಜೊತೆಗೆ ನಿನ್ನ ಬೇಡಿಕೆಗಳು.. ದೋಷಾರೋಪಣೆಗಳು. ಇಲ್ಲ ಇನ್ನು ನಿನ್ನನ್ನು ತಲೆಯ ಮೇಲೆ ಹೊತ್ತುಕೊಳ್ಳಲಾಗದು"ಎಂದವನೇ ಗಿಡವನ್ನು ಹೂ ಕುಂಡದಿಂದ ಕಿತ್ತು ಬೇರೆ ಗಿಡಗಳೊಡನೆ ಹಿತ್ತಲಿನಲ್ಲಿ ನೆಟ್ಟ .. ಗಿಡ ಗೊಗರೆಯಿತು.. " ನೀನಿಲ್ಲದೆ ಬದುಕಿಲ್ಲ .. ಬಿಟ್ಟು ಹೋಗಬೇಡ ನನ್ನನ್ನು .. " ಊಹೂ!!! ಅವನು ಕರಗಲಿಲ್ಲ... ಅಲ್ಲೇ ಕಳೆಗಳ ಮಧ್ಯ ಒದ್ದಾಡಿತು ಆ ಗಿಡ.. ಹೋದವನು ಬಂದೇ ಬರುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಮೂರು ದಿನ ಕಾದು .... ನರಳಿ ಕೊನೆಗೆ ಸತ್ತು ಹೋಯಿತು.
ಇಲ್ಲಿ "ಅವನು " ಕೇವಲ ಸಾಂಕೇತಿಕ ಅಷ್ಟೇ.. ಅವನು ಅವಳು ಇಬ್ಬರೂ ಆಗಬಹುದು .
ನಮ್ಮಲ್ಲಿ ಹಲವರ "ಪ್ರೀತಿ"ಯ ಜೀವನ ಚಕ್ರ ಹೀಗೆ ಇರುತ್ತದೆ ಅಲ್ವಾ?ಊಹಿಸಿಯೆ ಇರದ ಸಂದರ್ಭದಲ್ಲಿ , ಯಾವುದೋ ವಿಚಿತ್ರ ಸನ್ನಿವೇಶದಲ್ಲಿ ಪ್ರೀತಿಗೆ ಬಿದ್ದು ಬಿಡುತ್ತೇವೆ . ಅವಳ ಕೆನ್ನೆಯ ಹೊಳಪು,ಅವನ ದನಿಯ ಮಾದಕತೆ ,ಅವಳ ನಿಷ್ಕಲ್ಮಶ ನಗು ,ಅವನ ಮೋಹಕ ನೋಟ.. ಹೀಗೆ ಶುರುವಾಗುತ್ತೆ. ಪ್ರೀತಿ ಮೊಳೆತಾಗ ಅಲ್ಲಿ ಭಾವನೆಗಳದ್ದೆ ಕಾರುಬಾರು.. ಈ ಭಾವ ತೀವ್ರತೆಯಲ್ಲಿ ಹುಟ್ಟುವ ಕವಿತೆಗಳೆಷ್ಟೋ? ಚಿಗುರುವ ಕನಸುಗಳೆಷ್ಟೋ ?ಒಟ್ಟಿಗೆ ಕೇಳುವ ಹಾಡುಗಳೆಷ್ಟೋ ?ಮೊದಲ ಸಂಬಳದಲ್ಲಿ ಅವಳಿಗೊಂದು ಗಿಫ್ಟ್ ?ವಾರದಲ್ಲಿ ಮೂರು ಸರಿ ಅವನ ಇಷ್ಟದ ಡ್ರೆಸ್ !!ಏನೇ ಮಾಡಿದರೂ ಅದರಲ್ಲೊಂದು ಧನ್ಯತಾ ಭಾವ... ಎಷ್ಟೆಲ್ಲಾ ಸುಂದರ ಕಲ್ಪನೆಗಳು .."ನಮ್ಮ ಮದುವೆ ಹೀಗಿರಬೇಕು", "ನನಗೆ ಮೊದಲನೆಯದು ಹೆಣ್ಣು ಮಗುವೆ ಬೇಕು", "ನಿನ್ನ ಒಂದು ದಿನಾನು ಬಿಟ್ಟಿರಲ್ಲ.. ಈಗ್ಲೇ ಹೇಳಿದೀನಿ ನೋಡು ಅಮ್ಮನ ಮನೆಗೂ ಕಳ್ಸಲ್ಲ " ಬೆಸೆದ ಬೆರಳುಗಳು .. ನೂರಾರು ಆಶ್ವಾಸನೆಗಳು .. ಅಲ್ಲಿ ತಕರಾರುಗಳೂ ಸುಂದರ ..ನೀನೊಬ್ಬ ಜೊತೆಗಿರು ,ಇಡೀ ಪ್ರಪಂಚಾನೇ ಎದರಿಸ್ತೀನಿ ಅನ್ನುವ ಭರವಸೆಗಳು. ಆಹ !ಅದೊಂದು ತಾವೇ ಸೃಷ್ಟಿಸಿಕೊಂಡ ಅದ್ಭುತ ಲೋಕ .. ಆದರೆ ....
ನಿಧಾನಕ್ಕೆ ಭಾವನೆಗಳ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತೆ.. ಪ್ರೀತಿ ಹಾಗು ಬದುಕನ್ನು ತೂಗಿಸಿಕೊಂಡು ಹೋಗುವ ಅನಿವಾರ್ಯತೆ ಬರುತ್ತದೆ .. ದಿನಗಳು ಕಳೆದಂತೆ ಪ್ರೀತಿಯ ರಾಗದಲ್ಲಿ ಅಲ್ಲೊಂದು ಇಲ್ಲೊಂದು ಅಪಸ್ವರ." ನೀನು ಬದಲಾಗಿದ್ಯ , ನೀನು ಯಾವಾಗ್ಲೂ ಮಗು ಥರ ಆಡೋದನ್ನ ನಿಲ್ಲ್ಸು, ನಿಂಗೆ ನನ್ ಮೇಲೆ ನಂಬಿಕೇನೆ ಇಲ್ಲ, ನೀನು ಯಾವತ್ತು ನನ್ನ ಪ್ರೀತಿ ಮಾಡೇ ಇಲ್ಲ"ಗಳು ಕೇಳಲು ಶುರುವಾಗುತ್ತೆ . "ಅದರರ್ಥ ಗಿರ್ಥಗಳು ಸೃಷ್ಟಿಕರ್ಥನಿಗಿರಲಿ" ಎಂದು ನಿರ್ಲಕ್ಷಿಸಿದ್ದ ಪ್ರಶ್ನೆಗಳೆಲ್ಲ "ದುತ್ ! ಎಂದು ಕಣ್ ಮುಂದೆ ಬಂದು ನಿಲ್ಲುತ್ತದೆ, ದುಃಸಪ್ನವಾಗಿ ಕಾಡಲು ಶುರು ಮಾಡುತ್ತದೆ . ಜವಾಬ್ಧಾರಿ ಅಂದುಕೊಂಡಿದ್ದೆಲ್ಲ ಈಗ ಹೊರೆ ಎನಿಸಲು ಶುರುವಾಗುತ್ತದೆ . ಅಮ್ಮನಂತಹ ಗೆಳೆಯನ ಅಸಡ್ಡೆ ಇವಳಿಗೆ ಸಹಿಸಿಕೊಳ್ಳಲಾಗುವುದಿಲ್ಲ.. ಮಗುವಿನಂತಹ ಗೆಳತಿಯ ಅಭದ್ರತೆಗಳು ಇವನಿಗೆ ಉಸಿರುಗಟ್ಟಿಸತೊಡಗುತ್ತದೆ.
ಇಲ್ಲಿ ತಪ್ಪು ಯಾರದ್ದು? ಹೀಗಾಗಲು ಕಾರಣ ಏನು ? ಪ್ರೀತಿಯಲ್ಲಿದ್ದ ಮಾತ್ರಕ್ಕೆ ಬೇರೆ ಎಲ್ಲವನ್ನು ಮರೆತೇ ಬಿಡಬೇಕ? ಅವ್ನು ಹೀಗೆ ಬದಲಾಗಿದ್ದು ಸರಿನಾ ?ಅವಳಿಗೆ ಯಾಕೆ ನನ್ನ ಮೇಲೆ ಅಷ್ಟು ಅಪನಂಬಿಕೆ? ಹೀಗೆ ಏಳುವ ನೂರಾರು ಪ್ರಶ್ನೆಗಳಿಗೆ ಉತ್ತರ ಅವರಿಬ್ಬರಲ್ಲೇ ಇರುತ್ತದೆ ಮತ್ತು ಅವರಿಬ್ಬರಲ್ಲಿ ಮಾತ್ರ ಇರುತ್ತದೆ .
ಆದರೆ ಒಂದಂತು ನಿಜ . ಪ್ರೀತಿಯಲ್ಲಿ ಬೀಳುವುದೇನು ದೊಡ್ಡ ವಿಷಯವಲ್ಲ ,ಆದರೆ ಪ್ರೀತಿಯಲ್ಲಿ ಇರುವುದು, ಪ್ರೀತಿಯಲ್ಲಿ ಬೆಳೆಯುವುದು ಇದ್ಯಲ್ಲಾ ಅದೊಂದು ದೊಡ್ಡ ಪರೀಕ್ಷೆ .ಪ್ರೀತಿ ಒಂದು ನಿರಂತರ ಕ್ರಿಯೆ!! ಅದನ್ನು ನಿಲ್ಲಿಸಲೇ ಬಾರದು.... ಸಂಬಂಧ ಹದಗೆಡುತ್ತಿರುವ ಸೂಚನೆ ಸಿಕ್ಕ ತಕ್ಷಣ ಎಚ್ಚೆತ್ತು ಕೊಳ್ಳಬೇಕು.. ನಿಜ ಹಾಗಂತ ಪ್ರೀತಿಯೊಂದೆ ಎಲ್ಲವು ಅಲ್ಲ ..ಕೇವಲ ಕನಸು ಕಾಣುವುದು ಮಾತ್ರ ಜೀವನ ಅಲ್ಲ!! ನಂಬಿಕೆಗಳ ತಳ ಒಡೆಯದಂತೆ ನೋಡಿಕೊಳ್ಳುವ ಜವಾಬ್ಧಾರಿ ಇಬ್ಬರದ್ದೂ. ತುಂಬಾ ತಾಳ್ಮೆಯಿಂದ ಕೂತು ,ಅಹಂ ಬಿಟ್ಟು ಮಾತಾಡಿ ನೋಡಿ,ಆಮೇಲೆ ಇಂತ ಪ್ರಶ್ನೆಗಳ ಹುಟ್ಟಿಗೆ ಆಸ್ಪದವೇ ಇರುವುದಿಲ್ಲ! ಇಷ್ಟು ದಿನ ನೀರು ಹಾಕಿ ನೋಡಿಕೊಂಡಿಲ್ಲ್ವ ??ಅನ್ನುವ ದರ್ಪಕ್ಕೆ ಇಲ್ಲಿ ಜಾಗವಿಲ್ಲ .. ಒಂದು ಹಂತದವರೆಗೆ ಅದನ್ನು ಜತನವಾಗಿ ನೋಡಿಕೊಳ್ಳಬೇಕು .. ಒಮ್ಮೆ ಅದರ ಬೇರು ಆಳವಾಗಿ ,ಕಾಂಡ ಭದ್ರವಾಗುವವರೆಗೆ ಪೊರೆದು ನೋಡಿ .. ಆಮೇಲೆ ಇಡೀ ಜೀವನ ಅದು ನಿಮ್ಮನ್ನು ಪೊರೆಯುತ್ತದೆ.. ಜೀವನಪೂರ್ತಿ ನಿಮ್ಮ ನೆರಳಾಗಿ ಇರುತ್ತದೆ.